Home year2023 ಕೋ ಧರ್ಮಾನುದ್ಧರಿಷ್ಯಸಿ?

ಕೋ ಧರ್ಮಾನುದ್ಧರಿಷ್ಯಸಿ?

by Akhand Jyoti Magazine

Loading

ಹಿಮಾಲಯದ ಶಿಖರಗಳಿಂದ ಬೀಸುತ್ತಿರುವ ಆಧ್ಯಾತ್ಮಿಕ ಮಾರುತ ನಮ್ಮತ್ತ ಬರುತ್ತಿದೆ. ಇದರಲ್ಲಿ ಮಹಾ ತಪಸ್ವಿಗಳ, ಮಹಾ ಸಿದ್ಧರ ತಪಃಪ್ರಾಣ ಸೇರಿದೆ. ಅದರಲ್ಲಿರುವ ವೇದನೆಯಿಂದ ಹುಟ್ಟಿದ ಪ್ರಶ್ನೆ – “ಕೋ ಧರ್ಮಾನುದ್ಧರಿಷ್ಯಸಿ? – ಯಾರು ಧರ್ಮವನ್ನು ಉದ್ಧರಿಸುತ್ತಾರೆ?” ನಮ್ಮ ಹೃದಯದಲ್ಲಿ ಸಂವೇದನೆಯಿದ್ದರೆ, ಆ ನೋವು ನಮಗೆ ಅರ್ಥವಾಗುತ್ತದೆ. ನಮ್ಮ ಪ್ರಾಣವು ಈ ಋಷಿಗಳ ವೇದನೆಯನ್ನು ಅನುಭವಿಸಬಲ್ಲವು. ಧರ್ಮವೆಂದರೆ ಪ್ರವಚನವಲ್ಲ. ಬೌದ್ಧಿಕ ತರ್ಕದ, ವಾಣಿಯ ವಾಕ್ಜಾಲವೂ ಅಲ್ಲ. ಧರ್ಮವೆಂದರೆ ತಪಸ್ಸು, ತಿತೀಕ್ಷೆ, ಕಷ್ಟ ಸಹಿಷ್ಣುತೆ. ಧರ್ಮವೆಂದರೆ ಇತರರ ದುಃಖವನ್ನು ತೊಡೆಯುವುದು. ಧರ್ಮವೆಂದರೆ ಸತ್ಯ ಹಾಗೂ ಒಳ್ಳೆಯತನದಿಂದ ಬದುಕುವುದು ಹಾಗೂ ಅವುಗಳಿಗಾಗಿ ಅವಶ್ಯಕತೆಯಿದ್ದಾಗ ಪ್ರಾಣವನ್ನು ತೊರೆಯುವುದೂ ಆಗಿದೆ. ಧರ್ಮವು ಸೇವೆಯ ಸಜಲ ಸಂವೇದನೆಯಾಗಿದೆ. ಧರ್ಮವು ಕಷ್ಟದ ನಿವಾರಣೆಗಾಗಿ ಹೊರಹೊಮ್ಮುವ ಮಹಾಸಂಕಲ್ಪವಾಗಿದೆ. ಧರ್ಮವು ಸಮಾಜದ ಪತನವನ್ನು ತಡೆಯಲು ಬೇಕಾದ ಯುದ್ಧದ ಮಹಾಘೋಷವಾಗಿದೆ. ಧರ್ಮವು ದುಷ್ಪ್ರವೃತ್ತಿಗಳ, ದುಷ್ಕೃತ್ಯಗಳ, ಕುರೀತಿಗಳ ವಿನಾಶಕ್ಕಾಗಿ ನಡೆಯುವ ಅಭಿಯಾನದ ಶಂಖಾನಾದವಾಗಿದೆ. ಧರ್ಮವು ಸರ್ವಹಿತಕ್ಕಾಗಿ ಸ್ವಹಿತವನ್ನು ತ್ಯಾಗ ಮಾಡುವುದಾಗಿದೆ.

ಇಂತಹ ಧರ್ಮವು ಕೇವಲ ತಪಸ್ಸಿನ ಅಗ್ನಿಯಿಂದಲೇ ಹುಟ್ಟುತ್ತದೆ. ಬಲಿದಾನದ ರಾಗದಲ್ಲಿ ಇದರ ಸುಮಧುರ ಗಾನ ಕೇಳಬರುತ್ತದೆ. ಮುಂಬರುವ ವಸಂತ ಪಂಚಮಿಯಂದು ಹಿಮಾಲಯದಿಂದ ಹರಿಯುತ್ತಿರುವ ಈ ಗಾಳಿಯು ನಮ್ಮ ಜೀವನದಲ್ಲಿ ಇದೇ ತಪಸ್ಸಿನ ಕಿಡಿಗಳನ್ನು ಪ್ರಜ್ವಲಿಸಲು ಬರುತ್ತಿದೆ. ನಾವು ಋಷಿಗಳ ಸಂತಾನವೆಂಬ ಹಾಗೂ ಇದರೊಂದಿಗೆ ಸೇರಿರುವ ಕರ್ತವ್ಯದ ಬೋಧೆಯನ್ನು ಮಾಡಲು ಬರುತ್ತಿದೆ. ನಾವೇ ಆ ಋಷಿಗಳ ಪ್ರಶ್ನೆಗೆ ಉತ್ತರ ನೀಡಬೇಕು. ನಾವೇ ನಮ್ಮ ಜೀವನದಲ್ಲಿ ಧರ್ಮದ ನಿಜವಾದ ರೂಪವನ್ನು ನೀಡಬೇಕು. ನಾವು ನಮ್ಮ ಜೀವನವನ್ನೇ ಯಜ್ಞಕುಂಡವನ್ನಾಗಿ ಮಾಡಿಕೊಂಡು ತಪಸ್ಸಿನ ಮಹಾಜ್ವಾಲೆಯಲ್ಲಿ ನಮ್ಮ ಶಕ್ತಿಯನ್ನು ಆಹುತಿಯನ್ನು ಅನವರತ ನೀಡಬೇಕು. ಈ ಧರ್ಮಯಜ್ಞದ ಫಲವೇ ಧರ್ಮದ ಸತ್ಯವನ್ನು ಎಲ್ಲೆಡೆ ವಿಸ್ತರಿಸುವುದು.

You may also like