Home year2023 ಸತ್ಯದ ಪ್ರಕಾಶ

ಸತ್ಯದ ಪ್ರಕಾಶ

by Akhand Jyoti Magazine

Loading

ನಾನು ಈ ವಿಶ್ವದಲ್ಲಿ ಬಹಳಷ್ಟು ವಸ್ತುಗಳನ್ನು ನೋಡಿರುವೆನು; ಅಂತೆಯೇ ಬಹಳಷ್ಟು ಅನುಭವವನ್ನು ಪಡೆದಿರುವೆನು. ಆದರೆ ನನಗೆ ಸತ್ಯಕ್ಕಿಂತ ಮಿಗಿಲಾದ ಮತ್ತೊಂದು ವಸ್ತು ಈ ವಿಶ್ವದಲ್ಲಿ ಸಿಗಲೇ ಇಲ್ಲ. ಈ ಭೂಮಿಯಲ್ಲಿ ಅನೇಕ ಪ್ರಕಾಶಗಳಿವೆ. ಆದರೆ ಮಹಾಪುರುಷರು ಸತ್ಯದ ಪ್ರಕಾಶವನ್ನೇ ನಿಜ ಪ್ರಕಾಶವೆಂದು ಪರಿಗಣಿಸಿರುವರು. ಸಜ್ಜನ ವ್ಯಕ್ತಿಯಾದವನು ಸುಳ್ಳು ಮಾತು ಆಡುವುದಿಲ್ಲ. ಮಾನವೀಯತೆಯ ಧರ್ಮವನ್ನು ಪಾಲಿಸುತ್ತಾನೆ. ಅಂತಿರುವಾಗ ಇತರ ಧರ್ಮವನ್ನು ಪಾಲಿಸುವ ಅಗತ್ಯವಾದರೂ ಏನಿದೆ? ನೀರಿನಿಂದ ಶರೀರವನ್ನು ಶುದ್ಧಗೊಳಿಸಬಹುದು; ಆದರೆ ಹೃದಯ ಕೇವಲ ಮಾತಿನ ಸತ್ಯ ಮತ್ತು ವ್ಯವಹಾರಿಕ ಸತ್ಯದಿಂದಲೇ ಶುದ್ಧವಾಗುವುದು. ಮನಸ್ಸಿನಲ್ಲಿ ಶಾಶ್ವತ ಸತ್ಯ ನೆಲೆವೂರಿಸಿಕೊಂಡಿದ್ದ ವ್ಯಕ್ತಿ ಇತರರ ಮೇಲೆ ಶಾಸನ ನಡೆಸಲು ಸಮರ್ಥನಾಗುವನು. ಅವನೇ ಶ್ರೇಷ್ಠ ದಾನಿ. ಅವನೇ ಮಹಾನ್ ತಪಸ್ವಿ, ನಿರಂತರ ಸತ್ಯ ಪಾರಾಯಣ ಮಾಡುವಂತಹ ವೈಶಿಷ್ಟ್ಯತೆ ಇವನದ್ದು. ಸಿದ್ಧಿ-ಬುದ್ಧಿ ಇವನ ಚರಣದಲ್ಲಿ ನತಮಸ್ತಕವಾಗಿದ್ದುಕೊಂಡು ಅವನೊಂದಿಗೆ ನೆಲೆಸುತ್ತದೆ. ಮನುಷ್ಯನಿಗೆ ಇದಕ್ಕಿಂತ ಹಿರಿದಾದ ಕೀರ್ತಿಯ ಅವಶ್ಯಕತೆಯೇ ಇಲ್ಲ. ಜನತೆ ಅವನನ್ನು ‘ಸತ್ಯವಾದಿ’ ಎಂದು ಕರೆಯುವರು. ಅದಕ್ಕಿಂತ ಹಿರಿದಾದ ಸೌಭಾಗ್ಯ ಮತ್ತೇನು ಬೇಕಾಗಿದೆ ಮನುಷ್ಯನಿಗೆ?

ಸತ್ಯದೊಂದಿಗೆ ವ್ಯಕ್ತಿಯಲ್ಲಿ ಮೃದು ಭಾಷೆಯೂ ಬೇಕಾಗಿದೆ. ಅಂತೆಯೇ ಇತರರ ಹಿತೈಷಿಯಾಗಿ ಬಾಳಬೇಕು. ತನ್ನ ಸತ್ಯದಿಂದ ಇತರರಿಗೆ ಅಪಾಯ ಒದಗುವಂತಿದ್ದರೆ ಅಲ್ಲಿ ಸುಳ್ಳು ಹೇಳುವುದೇ ಉಚಿತ. ಸತ್ಯವೆಂದೂ ಅಪ್ರಿಯವಾಗಿರಬಾರದು. ನಿಮ್ಮ ಮಾತಿನಿಂದ ಇತರರ ಚಿತ್ತ ಕದಡುವಂತಿದ್ದರೆ, ಅಲ್ಲಿ ಅದು ಅನಾವಶ್ಯಕವೆಂದಾದರೆ ಆ ಮಾತು ಸತ್ಯವಾದರೂ ಸತ್ಯವೆಂದು ಹೇಳಲು ಸಾಧ್ಯವಿಲ್ಲ. ಇಲ್ಲ, ಮಿಥ್ಯಾ ತತ್ವವನ್ನೇ ಪ್ರತಿಪಾದಿಸಿದಂತಾಗುವುದು. ಹಾಗಾಗಿ ಎಲ್ಲ ಸತ್ಯ ಹೇಳಲು ಹೋಗಬೇಡಿ. ಸುಳ್ಳು ಹೇಳಿದರೆ ನಿಮ್ಮ ಆತ್ಮವೇ ನಿಮಗೆ ಶಾಪ ಕೊಡುವುದು. ಅದಕ್ಕಾಗಿ ಮೌನವಾಗಿದ್ದುಕೊಂಡು ಸ್ಥಿರ ಸತ್ಯವನ್ನು ಹಿಂಬಾಲಿಸಿರಿ. ನ್ಯಾಯಯುಕ್ತ ಕಾರ್ಯ ಮಾಡಲು ಹೆದರಬೇಡಿ. ಯಾವ ಮಾತನ್ನು ನೀವು ನ್ಯಾಯಯುಕ್ತವೆಂದು ಎಣಿಸುವಿರೋ, ಆ ನ್ಯಾಯವನ್ನು ಸ್ಥಿರಗೊಳಿಸಿರಿ. ಮತ್ತೆ ಆ ಸತ್ಯಪೂರ್ಣ ನ್ಯಾಯದಲ್ಲಿ ಲೀನವಾಗಿರಿ. ಆ ಪ್ರಕಾಶದೊಂದಿಗೆ ಮುಂದೆ ಸಾಗಿರಿ.

24 | ಅಖಂಡ ಜ್ಯೋತಿ | ಸೆಪ್ಟೆಂಬರ್ – ಆಕ್ಟೋಬರ್ 2018

You may also like