ಬುದ್ಧರು ತಮ್ಮ ಶಿಷ್ಯಂದಿರಿಗೆ ಹೆಚ್ಚಾಗಿ ಶಾಂತಿಯನ್ನೇ ಬೋಧಿಸುತ್ತಿದ್ದರು. ಒಂದು ಬಾರಿ ಗೌತಮ ಬುದ್ಧರು ತಮ್ಮ ಶಿಷ್ಯರೊಂದಿಗೆ ಶಾಂತವಾಗಿ ಬಹಳ ಕಾಲ ಮೌನವಾಗಿ ಕುಳಿತಿದ್ದರು. ಆ ಸಮಯದಲ್ಲಿ ಅವರ ಒಬ್ಬ ಶಿಷ್ಯನು ಬುದ್ಧರು ಅಸ್ವಸ್ಥರಿದ್ದಾರೆಂದು ಭಾವಿಸಿ, ಅವರನ್ನು ಪ್ರಶ್ನಿಸಿದರು. “ಗುರುಗಳೆ, ನೀವೇಕೆ ಇಂದು ಇಷ್ಟೊಂದು ಮೌನವಾಗಿದ್ದೀರಿ?” ಬುದ್ಧರು ಏನೂ ಉತ್ತರಿಸಲಿಲ್ಲ. ಶಿಷ್ಯರೆಲ್ಲ ಚಿಂತಾಕ್ರಾಂತರಾಗಿ ಗುರುಗಳು ಏಕೆ ಮೌನವಾಗಿದ್ದಾರೆಂದು ಅವರಲ್ಲಿಯೇ ಯೊಚಿಸತೊಡಗಿದರು.
ಇಷ್ಟರಲ್ಲಿ ದೂರದಲ್ಲಿ ಓರ್ವ ವ್ಯಕ್ತಿ ಜೋರಾಗಿ ಮಾತಾಡತೊಡಗಿದನು “ಇಂದು ನನ್ನನ್ನು ಸಭೆಯಲ್ಲಿ ಭಾಗವಹಿಸಲು ಏಕೆ ಅನುಮತಿ ನೀಡಿಲ್ಲ?” ಎಲ್ಲರೂ ಯೊಚಿಸತೊಡಗಿದರು. ಇಷ್ಟಾದರೂ ಬುದ್ಧರು ಪ್ರಭಾವಿತರಾಗದೆ ಮೌನವಾಗಿಯೆ ಧ್ಯಾನಿಸುತ್ತಿದ್ದರು. ಮತ್ತೆ ಆ ವ್ಯಕ್ತಿಯು ಪ್ರಶ್ನಿಸಿದನು. “ಸಭೆಯಲ್ಲಿ ನನಗೆ ಏಕೆ ಅನುಮತಿ ನೀಡಿಲ್ಲ?” ಒಬ್ಬ ಉದಾರ ಮನೋಭಾವದ ಶಿಷ್ಯನೊಬ್ಬನು ಎದ್ದು ನಿಂತು ” ನೀವು ಸಭೆಯೊಳಗೆ ಬರಬಹುದು” ಎಂದನು.
ಬುದ್ಧ ಕಣ್ಣು ಬಿಟ್ಟು ಉತ್ತರಿಸಿದರು, “ಇಲ್ಲ. ಆ ವ್ಯಕ್ತಿ ಅಸ್ಪೃಶ್ಯನು, ಅವನಿಗೆ ಸಭೆಯಲ್ಲಿ ಪ್ರವೇಶವಿಲ್ಲ”. ಇದನ್ನು ಕೇಳಿ ಶಿಷ್ಯರೆಲ್ಲರು ಆಶ್ಚರ್ಯಗೊಂಡರು. ಬುದ್ಧರು ಶಿಷ್ಯರ ಮನಸ್ಸನ್ನು ಅರಿತು ಹೇಳಿದರು, “ಹೌದು, ಈ ವ್ಯಕ್ತಿಯು ಅಸ್ಪೃಶ್ಯನು”. ಇದಕ್ಕೆ ಅವರ ಶಿಷ್ಯರು ಕೇಳಿದರು. ನಮ್ಮ ಧರ್ಮದಲ್ಲಿ ಜಾತಿ-ಮತಗಳ ಅಂತರವಿಲ್ಲವಲ್ಲ. ಹಾಗಿದ್ದಾಗ ಈತ ಅಸ್ಪೃಶ್ಯ ಹೇಗಾಗುವನು?”
ಬುದ್ಧರು ಉತ್ತರಿಸಿದರು, “ಆತನು ಕೋಪದಲ್ಲಿರುವನು. ಕೋಪದಲ್ಲಿರುವ ವ್ಯಕ್ತಿ ತನ್ನ ಏಕಾಗ್ರತೆ ಕಳೆದುಕೊಂಡಿರುವನು. ಅವನು ಕೆಲ ಕಾಲ ಏಕಾಂತದಲ್ಲಿರಬೇಕು. ತನ್ನ ಪಶ್ಚಾತ್ತಾಪದ ನಂತರ ಅವನಿಗೆ ಅರಿವಾಗುವುದು, ಅಹಿಂಸೆಯೊಂದೇ ಮೊದಲ ಹಾಗೂ ಮಹಾನ್ ಕರ್ತವ್ಯ”. ಇದನ್ನು ಕೇಳಿ ಆ ವ್ಯಕ್ತಿಯು ಬುದ್ಧರ ಚರಣ ಸ್ಪರ್ಷಿಸಿ ಇನ್ನೆಂದೂ ತಾನು ಕೋಪಿಸಿಗೊಳ್ಳನೆಂದು ಶಪಥ ಮಾಡಿದನು.
ಇದರಿಂದ ಶಿಷ್ಯರೆಲ್ಲರು ಕೋಪದ ಕುರಿತು ಒಂದು ಹೊಸ ಪಾಠ ಕಲಿತರು. ನಾವು ಸಹ ಕೋಪಗೊಂಡಾಗ ಏಕಾಂತದಲ್ಲಿರಬೇಕು ಇಲ್ಲವಾದಲ್ಲಿ ಬೇರೆಯವರಿಗೆ ನೋವುಂಟಾಗಬಹುದು. ಕೋಪ ಮನಸಿನ ಒಂದು ಕುದಿತ. ಇದರಿಂದ ನಮ್ಮ ಶಕ್ತಿ ಕುಂದುತ್ತದೆ. ಹಾಲು ಉಕ್ಕುವಾಗ ಹೇಗೆ ಕೆನೆ ಪಾತ್ರೆಯಿಂದ ಹೊರ ಬೀಳುತ್ತದೋ ಹಾಗೆಯೇ ಕೋಪ ಬಂದಾಗ ನಮ್ಮ ಶಕ್ತಿಯು ಕುಂದುವುದು. ಅದಕ್ಕೆ ಎಲ್ಲಾ ಸಂದರ್ಭಗಳಲ್ಲಿ ನಮ್ಮ ಕೋಪವನ್ನು ನಿಯಂತ್ರಣದಲ್ಲಿರಿಸುವ ಅಭ್ಯಾಸ ಮಾಡಬೇಕು. ಇಲ್ಲವಾದಲ್ಲಿ ಪಶ್ಚಾತ್ತಾಪದ ಬದಲಿಗೆ ಏನೂ ಉಳಿಯುವುದಿಲ್ಲ.
ಅಖಂಡ ಜ್ಯೋತಿ, ಸೆಪ್ಟೆಂಬರ್ – ಆಕ್ಟೋಬರ್ 2018