Home year2023 ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದು ಮಹಾನ್ ವ್ಯಕ್ತಿಗಳ ಲಕ್ಷಣ

ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದು ಮಹಾನ್ ವ್ಯಕ್ತಿಗಳ ಲಕ್ಷಣ

by Akhand Jyoti Magazine

Loading

ಜೂನ್ 17, 1775, ಅಮೆರಿಕಾದಲ್ಲಿ ಬ್ರಿಟಿಷರ ವಿರುದ್ಧ ಅಮೆರಿಕನ್ನರ ಸ್ವಾತಂತ್ರ್ಯ ಸಮರ ನಡೆದಿತ್ತು. ಅಮೆರಿಕಾದ ಸೈನ್ಯದ ಒಬ್ಬ ಅಧಿಕಾರಿ ಜಾನ್ ಕ್ಯಾಲೆಂಡರ್ ತನ್ನ ತುಕಡಿಯ ನೇತೃತ್ವ ಮಾಡುತ್ತಿದ್ದನು. ಯುದ್ಧದಲ್ಲಿ ಆತನ ಎದುರಿದ್ದ ಬ್ರಿಟಿಷ್ ಸೈನ್ಯವು ಬಹಳ ಬಲಿಷ್ಟವಾಗಿತ್ತು. ಅದನ್ನು ನೋಡಿ ಜಾನ್ ಯುದ್ಧರಂಗವನ್ನು ಬಿಟ್ಟು ಓಡಿಹೋದನು. ಆತನ ತುಕಡಿಯ ಅನೇಕ ಸೈನಿಕರು ಆ ಯುದ್ಧದಲ್ಲಿ ಮೃತರಾದರು. ಆ ಯುದ್ಧದ ಎರಡು ತಿಂಗಳ ನಂತರ, ಅಮೆರಿಕನ್ ಸೇನಾನಾಯಕ ಜಾರ್ಜ್ ವಾಷಿಂಗ್ಟನ್ ಯುದ್ಧರಂಗದಲ್ಲಿ ತೋರಿಸಿದ ಹೇಡಿತನಕ್ಕೆ ಜಾನ್ ಕ್ಯಾಲೆಂಡರ್‌ನನ್ನು “ಕೋರ್ಟ್ ಮಾರ್ಶಲ್” ಮಾಡಿ ಸೈನ್ಯದಿಂದ ಹೊರಹಾಕಿದನು.

ಈ ಘಟನೆ ಕ್ಯಾಲೆಂಡರ್‌ನ ಜೀವನವನ್ನು ಬದಲಾಯಿಸಿತು. ಆತನು ಅದೇ ಸೈನ್ಯದ ತುಕಡಿಯಲ್ಲಿ ಒಬ್ಬ ಸಾಮಾನ್ಯ ಸೈನಿಕನಾಗಿ ಮತ್ತೆ ಸೇರಿದನು. ಸರಿಸುಮಾರು ಒಂದು ವರ್ಷದ ನಂತರ ಆಗಸ್ಟ್ 27, 1776ರಂದು ಜಾನ್ ಕ್ಯಾಲೆಂಡರ್ ಮತ್ತೆ ಅದೇ ಬಗೆಯ ಪರಿಸ್ಥಿತಿಯನ್ನು ಎದುರಿಸಿದನು. ಮತ್ತೊಮ್ಮೆ ಆತನ ತುಕಡಿಯು ಪ್ರಬಲ ಬ್ರಿಟಿಷ್ ದಾಳಿಗೆ ಈಡಾಯಿತು. ತುಕಡಿಯ ಸೈನಿಕರು ಓಡಿಹೋಗುತ್ತಿದ್ದರು. ಆದರೆ ಈ ಬಾರಿ ಕ್ಯಾಲೆಂಡರ್ ಹೆದರಲಿಲ್ಲ. ಅತ್ಯಂತ ಸಾಹಸದಿಂದ ಮುನ್ನುಗ್ಗಿ ಹೋಗಿ ಬ್ರಿಟಿಷ್ ಸೈನ್ಯದ ಮೇಲೆ ತೋಪಿನಿಂದ ದಾಳಿ ಮಾಡಿದನು, ಬ್ರಿಟಿಷ್ ಸೈನಿಕರು ಆತನನ್ನು ಸುತ್ತುವರೆದರು. ಅವನ ಮೇಲೆ ಗುಂಡು ಹಾರಿಸಲು ಮುಂದಾದಾಗ ಬ್ರಿಟಿಷ್ ತುಕಡಿಯ ಮುಖಂಡನು ಅವರನ್ನು ತಡೆದನು. ಜಾನ್ ಕ್ಯಾಲೆಂಡರ್‌ನ ಅಪ್ರತಿಮ ಶೌರ್ಯವನ್ನು ನೋಡಿ ಆತನು ಪ್ರಭಾವಿತನಾಗಿದ್ದನು. ಕ್ಯಾಲೆಂಡರ್‌ನನ್ನು ಬಂಧನದಲ್ಲಿ ಇರಿಸಲಾಯಿತು. ಆತನ ಶೌರ್ಯದ ವರದಿ ವಾಷಿಂಗ್ಟನ್‌ ಬಳಿ ಕೂಡಾ ಸೇರಿತು.

ಒಂದು ವರ್ಷ ಬಂಧನದಲ್ಲಿ ಇದ್ದ ನಂತರ ಬ್ರಿಟಿಷ್ ಹಾಗೂ ಅಮೆರಿಕನ್ ಸೈನ್ಯದಲ್ಲಿದ್ದ ಬಂಧಿಗಳನ್ನು ವಿನಿಮಯ ಮಾಡಿದಾಗ ಜಾರ್ಜ್ ವಾಷಿಂಗ್ಟನ್ ಕ್ಯಾಲೆಂಡರ್‌ನನ್ನು ಹಿಂತಿರುಗಿಸಬೇಕೆಂದು ತಾಕೀತು ಮಾಡಿದನು. ಆ ನಂತರ ಬಿಡುಗಡೆಯಾದ ಕ್ಯಾಲೆಂಡರ್‌ಗೆ ಆತನ ಮೊದಲ ಪದವಿಯನ್ನು ನೀಡಲಾಯಿತು.

ತಪ್ಪುಗಳು ಎಲ್ಲರೂ ಮಾಡುತ್ತಾರೆ. ಆದರೆ ತಮ್ಮ ತಪ್ಪನ್ನು ತಿದ್ದಿಕೊಂಡು ತಮ್ಮ ಜೀವನವನ್ನು ಉತ್ತಮ ಮಾರ್ಗದಲ್ಲಿ ನಡೆಸಿದವರು ಮಹಾನ್ ವ್ಯಕ್ತಿಗಳಾಗುತ್ತಾರೆ.

ಅಖಂಡ ಜ್ಯೋತಿ

| ಸೆಪ್ಟೆಂಬರ್ – ಆಕ್ಟೋಬರ್ 2018 | 17

You may also like