ನಮ್ಮ ಮನಸ್ಸು ಕಿಟಕಿಯ ಹಾಗೆ. ಇದು ಸ್ವಚ್ಛ, ಶುಭ್ರವಾಗಿದ್ದರೆ ಇದರಲ್ಲಿ ಅಸೀಮತೆಯು ಗೋಚರವಾಗುತ್ತದೆ. ಆ ದೃಶ್ಯವು ಸೀಮಿತವಾಗಿರುತ್ತದೆ, ಆ ಅನಂತದ ಒಂದು ದೃಶ್ಯ ಮಾತ್ರವಾಗಿರುತ್ತದೆ. ಆದರೆ ಇದೇ ಪ್ರತಿಬಿಂಬವು ಅನಂತತೆಯನ್ನು ಸಾಧಿಸುವ ದಾರಿಯ ಬಾಗಿಲಾಗುತ್ತದೆ. ದಾರಿಯಲ್ಲಿ ಸಾಗಿದಂತೆ, ಪ್ರತಿಬಿಂಬವು ಹಿಂದೆ ಉಳಿಯುತ್ತದೆ; ಅನಂತದಲ್ಲಿ ಪ್ರವೇಶ ದೊರೆಯುತ್ತದೆ. ಹೀಗೆ ಈ ಸಣ್ಣ ಮನಸ್ಸಿನಿಂದ ಶಾಶ್ವತ, ಅನಂತ, ಅಸೀಮ ಸತ್ಯದೊಂದಿಗೆ ಹೇಗೆ ಸಂಪರ್ಕ ಏರ್ಪಡುತ್ತದೆ?
ಸಣ್ಣದಾದ ಕಿಟಕಿಯಿಂದ ಹೊರಗಿನ ವಿಶಾಲ ಆಕಾಶವು ಕಾಣಿಸುತ್ತದೆ. ಕಿಟಕಿಯಲ್ಲಿ ಸಂಪೂರ್ಣ ಆಕಾಶ ಕಾಣಿಸುವುದಿಲ್ಲ. ಆದರೂ ಕಾಣಿಸುವುದು ಆಕಾಶವೇ. ಇದೇ ರೀತಿಯಲ್ಲಿ ನಮ್ಮ ಮನಸ್ಸು ಕೂಡಾ ಆ ಪರಮಾತ್ಮ ತತ್ವಕ್ಕೆ ಕಿಟಕಿಯಾಗಿದೆ. ನಮ್ಮ ಮನಸ್ಸು ಕೂಡಾ ಆ ಪರಮಾತ್ಮನ ಅಂಶವೇ. ನನ್ನ-ನಿನ್ನ ಎಂಬ ಸಂಕುಚಿತ ಭಾವನೆ ಮನಸ್ಸನ್ನು ಕುಗ್ಗಿಸಿಬಿಟ್ಟಿದೆ.
ಉಪನಿಷತ್ತುಗಳಲ್ಲಿ ಪರಮಾತ್ಮನ ಸ್ವರೂಪದ ಬಗ್ಗೆ ಅಂಶವು ಪೂರ್ಣಕ್ಕೆ ಸಮಾನ ಎಂದು ಹೇಳಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳಲು ಅನಂತವನ್ನು ಅರ್ಥ ಮಾಡಿಕೊಳ್ಳಬೇಕು. ಅನಂತವನ್ನು ವಿಭಜಿಸುವುದು ಸಾಧ್ಯವಿಲ್ಲ. ಅದೇ ರೀತಿಯಲ್ಲಿ ಆಕಾಶವನ್ನು ವಿಭಜಿಸುವುದೂ ಸಾಧ್ಯವಿಲ್ಲ. ಆದರೂ ಜನರು ತಮ್ಮ ಕಿಟಕಿಯಿಂದ ಕಾಣುವುದು ತಮ್ಮ ಆಕಾಶ, ಇನ್ನೊಬ್ಬರ ಕಿಟಕಿಯಲ್ಲಿ ಕಾಣಿಸುವುದು ಅವರ ಆಕಾಶ ಎಂದು ಹೇಳಕೊಳ್ಳುತ್ತಾರೆ. ಆದರೂ ಆಕಾಶವು ಒಂದೇ.
ಕಿಟಕಿಯಲ್ಲಿ ಕೊಳೆ ಇದ್ದರೆ, ನಮಗೆ ಆಕಾಶವು ಕೊಳಕಾಗಿದ್ದಂತೆ ಕಾಣಿಸುತ್ತದೆ. ಆದರೆ ಈ ಕೊಳೆ ಕೇವಲ ಕಿಟಕಿಯ ಗಾಜಿನಲ್ಲಿ ಮಾತ್ರ ಇದೆ. ಅದೇ ರೀತಿಯಲ್ಲಿ ನಾವೂ ಪರಮಾತ್ಮನನ್ನು ನೋಡುವಾಗ ನಮ್ಮ ಮನಸ್ಸಿನ ಮಲಿನತೆ ನಮ್ಮ ದೃಷ್ಟಿಯನ್ನು ಸಂಕುಚಿತಗೊಳಿಸುತ್ತದೆ. ನಮ್ಮ ಶಕ್ತಿ ಸಾಮರ್ಥ್ಯಗಳನ್ನು ನಾವು ನಮ್ಮ ಕಿಟಕಿಯ ಮೂಲಕ ನೋಡಿದಾಗ, ನಮ್ಮ ಶಕ್ತಿಗೆ ಮಿತಿ ಇದೆ ಎನಿಸುತ್ತದೆ. ಇದೂ ಒಂದು ಭ್ರಮೆಯೇ! ಮನಸ್ಸೆಂಬ ಕನ್ನಡಿಯನ್ನು ಶುಭ್ರಗೊಳಿಸುವುದೇ ಆಧ್ಯಾತ್ಮಿಕ ಸಾಧನೆಗಳ ಉದ್ದೇಶವಾಗಿದೆ. ಈ ಕಿಟಕಿಯನ್ನು ಶುಭ್ರಗೊಳಿಸುವುದು, ಸಾಧನೆಯ ಮೊದಲನೆಯ ಹಂತ. ಎರಡನೆಯ ಹಂತದಲ್ಲಿ ನಮ್ಮ ಹಾಗೂ ಆಕಾಶದ ನಡುವಿನ ಕಿಟಕಿ, ಗೋಡೆಗಳು ಕುಸಿದು ಬೀಳುತ್ತವೆ. ಅವುಗಳು ಬಿದ್ದಂತೆ, ಸಂಕುಚಿತ ಮನೋಭಾವವು ತೊಲಗಿ, ವಿರಾಟ್ನ ಅನುಭವವಾಗುತ್ತದೆ.
ಅಖಂಡ ಜ್ಯೋತಿ
ಸೆಪ್ಟೆಂಬರ್ – ಆಕ್ಟೋಬರ್ 2018