ಒಬ್ಬ ರಾಜ ಬಹಳ ಕೋಪಿಷ್ಠನೂ, ಅನಾಚಾರಿಯೂ ಆಗಿದ್ದನು. ಅವನ ವರ್ತನೆಯಿಂದ ಪ್ರಜೆಗಳು ಮಾತ್ರವಲ್ಲದೆ, ಕುಲಗುರು ಹಾಗೂ ಮಂತ್ರಿಗಳೂ ಚಿಂತಿತರಾಗಿದ್ದರು. ಅವರೆಲ್ಲರೂ ತಮ್ಮ ವ್ಯಥೆಯನ್ನು ತೋಡಿಕೊಳ್ಳಲು ಭಗವಾನ್ ಬುದ್ಧನ ಬಳಿ ಬಂದರು. ಅವರ ಕೋರಿಕೆಯನ್ನು ಕೇಳಿ ಭಗವಾನ್ ಬುದ್ಧರು – “ನೀವು ಚಿಂತಿಸಬೇಡಿ, ನಾನು ರಾಜನೊಂದಿಗೆ ಮಾತನಾಡುತ್ತೇನೆ” ಎಂದು ಸಾಂತ್ವನ ನೀಡಿದರು.
ಒಂದು ದಿನ ಬುದ್ಧರು ರಾಜನ ಆಸ್ಥಾನಕ್ಕೆ ಬಂದರು. ರಾಜನು ಶ್ರದ್ಧೆಯಿಂದ ಅವರನ್ನು ಬರಮಾಡಿಕೊಂಡನು. ನಂತರ ರಾಜ ಹಾಗೂ ಭಗವಾನ್ ಬುದ್ಧರು ಉದ್ಯಾನವನಕ್ಕೆ ಹೋದರು. ಅಲ್ಲಿ ನಡೆಯುತ್ತಾ ಮಾತನಾಡುತ್ತಾ ಅವರು ಬೇವಿನ ಗಿಡವೊಂದರ ಬಳಿ ಬಂದರು. ಆಗ ಭಗವಾನ್ ಬುದ್ಧರು ರಾಜನಿಗೆ ಆ ಗಿಡದ ಎಲೆಯನ್ನು ತಿನ್ನುವಂತೆ ಹೇಳಿದರು.
ರಾಜನು ಆ ಎಲೆಯನ್ನು ತಿಂದಾಗ ಆ ಕಹಿಗೆ ಅವನ ಮುಖ ಕಹಿಯಾಯಿತು ಹಾಗೂ ಕೋಪ ಬಂದಿತು. ತಕ್ಷಣವೇ, ಸೇವಕರನ್ನು ಕರೆದು ಆ ಗಿಡವನ್ನು ಕಿತ್ತು ಹಾಕಿಸಿದನು. ಅದನ್ನು ಗಮನಿಸುತ್ತಿದ್ದ ಬುದ್ಧರು ರಾಜನನ್ನು ಗಿಡವನ್ನು ಏಕೆ ಕಿತ್ತು ಹಾಕಿಸಿದೆ ಎಂದು ಕೇಳಿದರು. ಅದಕ್ಕೆ ರಾಜನು ಉತ್ತರಿಸಿದನು – “ಭಗವಾನ್, ಈ ಗಿಡವು ಈಗಲೇ ಇಷ್ಟು ಕಹಿಯಾಗಿದ್ದರೆ, ದೊಡ್ಡದಾದ ಮೇಲೆ ವಿಷವೃಕ್ಷವಾಗಿ ಬೆಳೆಯುತ್ತದೆ. ಅದನ್ನು ಈಗಲೇ ನಾಶ ಮಾಡುವುದು ಒಳ್ಳೆಯದು” ಎಂದನು.
ಭಗವಾನ್ ಬುದ್ಧರು – “ವತ್ಸ, ನಿನ್ನ ವರ್ತನೆಯೂ ಈ ಗಿಡದ ಎಲೆಯಂತೆ ಕಹಿಯಾಗಿದೆ. ನಿನ್ನ ಪ್ರಜೆಗಳೂ ಇದೇ ನಿರ್ಧಾರಕ್ಕೆ ಬಂದರೆ ನಿನಗೆ ಏನನಿಸುವುದು? ತನ್ನ ಜನರೊಂದಿಗೆ ಪ್ರೇಮಪೂರ್ವಕವಾಗಿ ನಡೆದುಕೊಳ್ಳುವ ರಾಜನೇ ಶ್ರೇಷ್ಠನು” ಎಂದರು. ಭಗವಾನರ ಮಾತಿನಿಂದ ರಾಜನ ಕಣ್ಣುಗಳು ತೆರೆದವು. ಅಂದಿನಿಂದ ಅವನ ನಡವಳಿಕೆಯಲ್ಲಿ ಮಾಧುರ್ಯ ಕಾಣಿಸತೊಡಗಿತು.