ತತ್ವಶಾಸ್ತ್ರದ ಅಧ್ಯಾಪಕರು ಒಮ್ಮೆ ತಮ್ಮ ತರಗತಿಯಲ್ಲಿ ಭೋದನೆ ವೇಳೆಯಲ್ಲಿ ಮೇಜಿನ ಮೇಲೆ ಖಾಲಿ ಬಾಟಲಿಗಳನ್ನು ಮತ್ತು ವಿವಿಧ ಆಕಾರದ ಕಲ್ಲು, ಮರಳನ್ನು ಇಟ್ಟುಕೊಂಡು ತರಗತಿ ಪ್ರಾರಂಭಿಸಿದರು.
ಖಾಲಿಯಾದ ಬಾಟಲಿಗೆ ದಪ್ಪವಾದ ಕಲ್ಲಿನ ಚೂರುಗಳನ್ನು ತುಂಬಿಸಿ, ಈ ಬಾಟಲಿ ಭರ್ತಿಯಾಯಿತೆ? ಎಂದು ಪ್ರಶ್ನಿಸಿದರು. ವಿದ್ಯಾರ್ಥಿಗಳಿಂದ ಬಂದ ಉತ್ತರ ಹೌದೆಂದು. ಅದೇ ಬಾಟಲಿಯಲ್ಲಿ ಮತ್ತೆ ಸಣ್ಣ-ಸಣ್ಣ ಕಲ್ಲಿನ ಚೂರುಗಳನ್ನು ಹಾಕಿ ಚೆನ್ನಾಗಿ ಕುಲುಕಿದರು. ದಪ್ಪ ಕಲ್ಲಿನ ಚೂರಿನ ಸಂದಿಯಲ್ಲೆಲ್ಲಾ ಈ ಸಣ್ಣ ಕಲ್ಲಿನ ಚೂರುಗಳು ಸೇರಿಕೊಂಡವು ಮತ್ತೊಮ್ಮೆ ಅಧ್ಯಾಪಕರು ಈಗ ಬಾಟಲಿ ತುಂಬಿದೆಯೇ? ಎಂದು ಪ್ರಶ್ನಿಸಲು ಮತ್ತೆ ವಿದ್ಯಾರ್ಥಿಗಳಿಂದ ಅದೇ ಹೌದೆನ್ನುವ ಉತ್ತರ. ಇನ್ನೊಮ್ಮೆ ತತ್ವಶಾಸ್ತ್ರದ ಅಧ್ಯಾಪಕರು ಮರಳನ್ನು ಅದೇ ಬಾಟಲಿಗೆ ಹಾಕಿ ಚೆನ್ನಾಗಿ ಕುಲುಕಿದರು. ಈಗ ಆ ಮರಳಿನ ಕಣಗಳೆಲ್ಲವೂ ಖಾಲಿಯಿದ್ದ ಸಣ್ಣ-ಸಣ್ಣ ಭಾಗದಲ್ಲೆಲ್ಲಾ ತುಂಬಿ ಮತ್ತೆ ಭರ್ತಿಯಾಯಿತು. ಮತ್ತೊಮ್ಮೆ ವಿದ್ಯಾರ್ಥಿಗಳಿಂದ ಒಂದೇ ಸ್ವರದಿಂದ ತುಂಬಿದೆ ಎಂಬ ಉತ್ತರ ಬಂತು.
ಅಧ್ಯಾಪಕರು ತಿಳಿಸುತ್ತಾರೆ, ‘ಈ ಬಾಟಲಿ(ಸೀಸೆ)ಯು ನಿಮ್ಮ ಜೀವನವನ್ನು ಸೂಚಿಸುತ್ತದೆ. ದೊಡ್ಡ ಕಲ್ಲಿನ ಚೂರುಗಳು – ಸಂಸಾರ, ಆರೋಗ್ಯ ಮತ್ತು ಮಕ್ಕಳನ್ನು ಬಿಂಬಿಸುತ್ತದೆ. ಬೇರೆಲ್ಲಾ ಬೇಡವೆಂದಾಗ ಈ ಮೂರರಿಂದ ನಿಮ್ಮ ಜೀವನ ತುಂಬಿರುತ್ತದೆ. ಸಣ್ಣ ಕಲ್ಲಿನ ಚೂರುಗಳು – ವೃತ್ತಿ, ಮನೆ ಮತ್ತು ಭೋಗದ ವಸ್ತುಗಳಾದ ವಾಹನ, ಟಿವಿ, ರೆಫ್ರಿಜರೇಟರ್ ಇಂಥವುಗಳನ್ನು ಬಿಂಬಿಸುತ್ತದೆ. ಇವುಗಳಿಂದಲೂ ನಿಮ್ಮಗಳ ಜೀವನ ತುಂಬಿರುತ್ತದೆ. ಮರಳು ಜೀವನದ ಅನೇಕಗಳನ್ನು ಬಿಂಬಿಸುತ್ತದೆ. ಅವುಗಳು ಸಣ್ಣ-ಸಣ್ಣ ವಿಷಯಗಳಿಂದ ತುಂಬಿದವು.
ಆದುದರಿಂದ ಮರಳಂತೆ ಸಣ್ಣ-ಸಣ್ಣ ವಿಚಾರಗಳಿಂದಲೇ ನಿಮ್ಮ ಜೀವನವನ್ನು ತುಂಬಿಸಿದರೆ ಭೋಗ, ವೃತ್ತಿ, ಪ್ರವೃತ್ತಿಗಳಿಗೆ ಸ್ಥಾನವಿಲ್ಲದಂತೆ ಅವಕಾಶವಿರುವುದಿಲ್ಲ. ಅದುದರಿಂದ ಸಣ್ಣದಾದ ಕ್ಲಿಷ್ಟ ಸಂಗತಿಗಳಿಗೆ ಗಮನಕೊಟ್ಟರೆ ಅದು ನಿಮ್ಮ ಸುಖಕ್ಕೆ ಮಾರ್ಗ. ಈ ಸನ್ಮಾರ್ಗದಲ್ಲಿ ನಡೆದರೆ ಕಲ್ಲಿನಂತಹ ಸಂಸಾರ, ಆರೋಗ್ಯ, ಮಕ್ಕಳು, ಮನೆ, ವೃತ್ತಿ, ವಸ್ತುಗಳೆಲ್ಲಾ ತನ್ನಷ್ಟಕ್ಕೆ ತಾನೇ ಕಾರ್ಯ ಸಾಧನೆಯಾಗುತ್ತದೆ. ನಿಮ್ಮ ಕಾರ್ಯ ವಿಂಗಡಿಸಿ, ಆ ಕಾರ್ಯಗಳಿಗೆ ಗಡುವು(ಸಮಯ) ನಿಗದಿಸಿ. ಮಿಕ್ಕವುಗಳು ತನ್ನಷ್ಟಕ್ಕೆ ತಾನೇ ಜರುಗುತ್ತದೆ.