Home year2023 *ಮೊದಲು ಕೊಡು, ನಂತರ ಸ್ವೀಕರಿಸು*

*ಮೊದಲು ಕೊಡು, ನಂತರ ಸ್ವೀಕರಿಸು*

by Akhand Jyoti Magazine

Loading

ಕೊಟ್ಟ ಮೇಲೆಯೇ ನೀನು ಪಡೆಯುವೆ ಎಂಬ ಈ ವಿಷಯ ಅತ್ಯಂತ ವಿಚಾರಣೀಯವಾಗಿದೆ. ತಮ್ಮಲ್ಲಿಗೆ ಬರುತ್ತಿರುವ ಸರ್ವರಿಗೂ ಮಹಾ ಪುರುಷರು ಇದನ್ನೇ ಕಲಿಸುತ್ತಿದ್ದರು. ಅದು ಏಕೆ? ಆಳವಾಗಿ ಮನನ ಮಾಡಿದ ಅನಂತರ ನನಗೆ ತಿಳಿದು ಬಂತು. ತ್ಯಾಗಕ್ಕಿಂತ ಮಿಗಿಲಾದ, ಅಂತೆಯೇ ಪ್ರತ್ಯಕ್ಷ ತಕ್ಷಣ ಫಲ ನೀಡುವ ಧರ್ಮ ಮತ್ತೊಂದು ಇಲ್ಲವೆಂಬುದು ನನಗೆ ಮತ್ತೆ ಮನದಟ್ಟಾಯಿತು. ವ್ಯಕ್ತಿಯ ನಿಜ ಸ್ವರೂಪ ಅವನ ತ್ಯಾಗಮಯ ಜೀವನ ಕ್ರಮದಿಂದ ಸಮಾಜಕ್ಕೆ ಪರಿಚಯ ನೀಡುತ್ತದೆ. ಮನಸ್ಸಿನಲ್ಲಿ ಒಟ್ಟಾಗಿ ನೆಲೆನಿಂತಿರುವ ಕುಸಂಸ್ಕಾರ ಮತ್ತು ವಿಕಾರತೆಯ ಹೊರೆಯನ್ನು ದೂರ ಸರಿಸಲು ತ್ಯಾಗಕ್ಕಿಂತ ಮಿಗಿಲಾದ ಸಾಧನ ಮತ್ತೊಂದು ಇಲ್ಲ.

ಪ್ರಪಂಚದಿಂದ ನೀವು ವಿದ್ಯೆ, ಬುದ್ಧಿ, ಸಂಪತ್ತು ಗಳಿಸಲು ಇಚ್ಚಿಸುವುದು ಹೌದಾಗಿದ್ದರೆ ಪ್ರಥಮದಲ್ಲಿ ನೀವು ಶೇಖರಿಸಿ ಇಟ್ಟ ಅಮೂಲ್ಯ ವಸ್ತುವನ್ನು ನಿಮ್ಮ ಗಂಟಿನಿಂದ ಹೊರಗೆ ತೆಗೆಯಿರಿ. ಇದು ನಿಮಗೆ ಧರ್ಮಾರ್ಥವಾಗಿ ಸಿಕ್ಕಿಲ್ಲ. ಇತರರನ್ನು ವಂಚಿಸಿ ಗಳಿಸಿದ ಸಂಪತ್ತು ಇದು ಅಲ್ಲ. ಇದು ಅತ್ಯಂತ ಶ್ರಮದಿಂದ ಗಳಿಸಿದ್ದು, ಹಣ, ರೊಟ್ಟಿ, ಅನ್ನ, ವಸ್ತ್ರ, ವಿದ್ಯೆ, ಶ್ರದ್ಧೆ, ಸದಾಚಾರ, ಭಕ್ತಿ, ಪ್ರೇಮ, ಸಮಯ, ಶರೀರ ನಿಮ್ಮಲ್ಲಿ ಇರುವ ಸರ್ವ ವಸ್ತುಗಳನ್ನೂ ಮುಕ್ತ ಹಸ್ತದಿಂದ ಸಮಾಜಕ್ಕೆ ಕೊಟ್ಟು ಬಿಡಿ. ಅದರ ಬದಲಾಗಿ ನಿಮಗೆ ಸಮಾಜದಿಂದ ಬಹಳಷ್ಟು ಸಿಗಲಿದೆ. ಗೌತಮ ಬುದ್ಧ ರಾಜ್ಯ ಸಿಂಹಾಸನ ತೊರೆದ. ಮಹಾತ್ಮ ಗಾಂಧಿ ಬ್ಯಾರಿಸ್ಟರ್ ಪದವಿ ಅಲ್ಲಗಳೆದರು. ಅವರು ನೀಡಿದ ಸೇವೆಗಿಂತ ಮಿಗಿಲಾಗಿ ಬಹಳಷ್ಟು ಪಡೆದರು. ಕೊಟ್ಟದ್ದು ಕಡಿಮೆ ದೊರಕಿದ್ದು ಧಾರಾಳ.

ವಿಶ್ವಕವಿ ರವೀಂದ್ರನಾಥ್ ಠಾಗೋರ್ ತಮ್ಮ ಒಂದು ಕವಿತೆಯಲ್ಲಿ ಹೇಳುತ್ತಾರೆ. “ಅವನು ಕೈಗಳೆರಡನ್ನು ಮುಂದಕ್ಕೆ ಚಾಚಿ ನನ್ನಿಂದ ಒಂದಿಷ್ಟು ಕೊಡೆಂದು ಬೇಡಿದ. ನಾನು ನನ್ನ ಚೀಲದಿಂದ ಒಂದು ಮುಷ್ಠಿ ಧಾನ್ಯ ಅವನ ಕೈಗೆ ಇತ್ತೆ. ಸಂಜೆ ಹಿಂತಿರುಗಿ ಬಂದು ನನ್ನ ಚೀಲ ನೋಡಿದೆ. ನಾನು ಕೊಟ್ಟಷ್ಟೇ ಭಾರದ ಚಿನ್ನದ ಗಟ್ಟಿಯೊಂದು ನನ್ನ ಚೀಲದಲ್ಲಿ ತೋರಿ ಬಂತು. ನಾನು ಬಿಕ್ಕಿ ಬಿಕ್ಕಿ ಅಳತೊಡಗಿದೆ, ಏಕೆಂದರೆ ನಾನು ಸರ್ವಸ್ವ ಕೊಡಲಿಲ್ಲ. ಕೊಟ್ಟದ್ದು ತುಣುಕು, ಪಡೆದದ್ದು ರಾಜನ ಐಶ್ವರ್ಯ.”

ಅಖಂಡ ಜ್ಯೋತಿ | ಸೆಪ್ಟೆಂಬರ್ – ಆಕ್ಟೋಬರ್ 2018 |

You may also like